ನ ಗುರು ರಧಿಕಂ ತತ್ತ್ವಂ ನ ಗುರು ರಧಿಕಂ ತಪಃ ।
ತತ್ತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ ॥
(ಗುರುವಿಗಿಂತ ಮಿಗಿಲಾದ ತತ್ವವಿಲ್ಲ, ಗುರುವಿಗಿಂತ ಮಿಗಿಲಾದ ತಪಸ್ಸಿಲ್ಲ. ಆ ಸದ್ಗುರುದೇವರಿಗೆ ಅನಂತ ಪ್ರಣಾಮಗಳು.)
ಹಿರೇಹಡಗಲಿ ಎಂಬ ಪವಿತ್ರ ಪುರದೊಳು ವೀರಯ್ಯನೆಂಬ ನಾಮದೊಂದಿಗೆ ಅವತರಿಸಿ, ಅಧ್ಯಾತ್ಮದ ದಿವ್ಯ ಬೆಳಕನ್ನು ಚೆಲ್ಲಿದ ಪರಮ ಪಾವನ ಮೂರ್ತಿ ಶ್ರೀ ಸದ್ಗುರು ಹಾಲವೀರಾರ್ಯ ಮಹಾಸ್ವಾಮಿಗಳು. ಇವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಧರೆಗಿಳಿದು ಬಂದ ಶಿವಸ್ವರೂಪರೇ ಆಗಿದ್ದರು.
ದಿವ್ಯ ಜನ್ಮ ಹಾಗೂ ಗುರುಕೃಪೆ
ಹಿರೇಹಡಗಲಿಯಲ್ಲಿ ವೀರಯ್ಯನಾಗಿ ಜನಿಸಿದ ಈ ಮಹಾತ್ಮರು, ರಾಂಪುರದ ಪರಮಪೂಜ್ಯ ಹಾಲಸ್ವಾಮಿಗಳ ದಿವ್ಯ ದೃಷ್ಟಿಗೆ ಪಾತ್ರರಾದರು. ಹಾಲಸ್ವಾಮಿಗಳ ಅಪಾರ ದಯೆ ಮತ್ತು ಅನುಗ್ರಹದಿಂದಾಗಿ 'ಹಾಲೇಶ' ಎಂಬ ನಾಮವನ್ನು ಪಡೆದು, ಅಧ್ಯಾತ್ಮ ಲೋಕದಲ್ಲಿ ಸೂರ್ಯನಂತೆ ಮೆರೆದರು. ಗುರು-ಶಿಷ್ಯರ ಈ ಸಂಬಂಧವು ಆಧ್ಯಾತ್ಮಿಕ ಜಗತ್ತಿನ ಒಂದು ಅಪೂರ್ವ ಮೈಲಿಗಲ್ಲು.
ಗುರುಪ್ರಸಾದೇನ ವಿನಾ ನ ಸಿದ್ಧಿಃ ನ ಚ ಮುಕ್ತಿತಾ ।
ತಸ್ಮಾದ್ ಗುರುಂ ಪ್ರಸಾದ್ಯೈವ ಭಜೇತ್ ಕಲ್ಯಾಣಕಾರಕಮ್ ॥
(ಗುರುಕೃಪೆಯಿಲ್ಲದೆ ಸಿದ್ಧಿಯಾಗಲಿ, ಮುಕ್ತಿಯಾಗಲಿ ಸಾಧ್ಯವಿಲ್ಲ. ಹಾಗಾಗಿ ಕಲ್ಯಾಣಕಾರಕನಾದ ಗುರುವನ್ನು ಪ್ರಸನ್ನಗೊಳಿಸಿಕೊಂಡು ಭಜಿಸಬೇಕು.)
ಶಿವಯೋಗಿ ಮತ್ತು ಸಿದ್ಧಪುರುಷ
ಶ್ರೀ ಹಾಲವೀರಾರ್ಯ ಮಹಾಸ್ವಾಮಿಗಳು ಕೇವಲ ಸಾಧಕರಲ್ಲ, ಅವರು ಮಹಾಯೋಗಿ, ಮಹಾತಪಸ್ವಿ ಹಾಗೂ ಶಿವಯೋಗ ಸಿದ್ಧಪುರುಷರು. ಕಠಿಣ ತಪಸ್ಸು, ಇಂದ್ರಿಯ ನಿಗ್ರಹ ಮತ್ತು ಸದಾ ಶಿವನಾಮ ಸ್ಮರಣೆಯ ಮೂಲಕ ಅವರು ಆತ್ಮಸಾಕ್ಷಾತ್ಕಾರವನ್ನು ಪಡೆದರು. ಅವರ ಸನ್ನಿಧಿಗೆ ಬಂದ ಭಕ್ತರ ಕಷ್ಟ-ಕಾರ್ಪಣ್ಯಗಳು ಕರ್ಪೂರದಂತೆ ಕರಗಿ ಹೋಗುತ್ತಿದ್ದವು. ಅವರ ಪ್ರತಿಯೊಂದು ನುಡಿಯೂ ವೇದವಾಕ್ಯವಾಗಿತ್ತು, ನಡೆಯು ಧರ್ಮ ಮಾರ್ಗವಾಗಿತ್ತು.
ಜೀವೈಕ್ಯ ಸಮಾಧಿ: ಲಿಂಗಾಂಗ ಸಾಮರಸ್ಯ
ಕೊನೆಗೆ ಆ ಜಗದೊಡೆಯನಾದ ಶಿವನ ಆಣತಿಯಂತೆ, ತಮ್ಮ ಅವತಾರ ಕಾರ್ಯವನ್ನು ಪೂರ್ಣಗೊಳಿಸಿದ ಶ್ರೀಗಳು, ನಿರ್ವಿಕಲ್ಪ ಜಾಗೃತ ಗದ್ದಿಗೆಯಲ್ಲಿ ಶಿವನಾಮ ಧ್ಯಾನಸ್ಥರಾದರು. ಉಸಿರುಸಿರಿನಲ್ಲೂ ಶಿವನನ್ನೇ ತುಂಬಿಕೊಂಡು, ಬಾಹ್ಯ ಪ್ರಪಂಚವನ್ನು ಮರೆತು ಜೀವೈಕ್ಯ ಸಮಾಧಿಸ್ತರಾದರು. ಶರೀರದಲ್ಲಿದ್ದಾಗಲೇ ಲಿಂಗದೊಳು ಅಂಗವನ್ನು ಒಂದಾಗಿಸಿ, 'ಲಿಂಗಾಂಗ ಸಾಮರಸ್ಯ'ವನ್ನು ಹೊಂದಿದ ಆ ಪುಣ್ಯದಿನ ಇಂದು.
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ ।
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ॥
ಸದ್ಗುರುವಿನ ಚರಣಗಳಿಗೆ ನಮನ
ಆ ದಿವ್ಯ ಚೇತನವು ಭೌತಿಕವಾಗಿ ನಮಗೆ ಕಾಣಿಸದಿದ್ದರೂ, ಜಾಗೃತ ಗದ್ದಿಗೆಯ ರೂಪದಲ್ಲಿ ಇಂದಿಗೂ ಭಕ್ತರ ಉದ್ಧಾರಕ್ಕಾಗಿ ಸನ್ನಿಹಿತವಾಗಿದೆ. ಶ್ರೀ ಸದ್ಗುರು ಹಾಲವೀರಾರ್ಯ ಮಹಾಸ್ವಾಮಿಗಳು ಲಿಂಗಾಂಗ ಸಾಮರಸ್ಯ ಹೊಂದಿದ ಈ ಮಹಾ ಪುಣ್ಯದಿನದಂದು, ಅವರ ಪವಿತ್ರ ಚರಣಾರವಿಂದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸೋಣ. ಆ ಮಹಾಸ್ವಾಮಿಗಳು ನಮ್ಮೆಲ್ಲರಿಗೂ ಸನ್ಮತಿ, ಸುಖ, ಶಾಂತಿ ಮತ್ತು ಭಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
ಓಂ ನಮಃ ಶಿವಾಯ ಸಿದ್ದಾಯ ಸದ್ಗುರುಭ್ಯೋ ನಮೋ ನಮಃ ।
ಶ್ರೀ ಸದ್ಗುರು ಹಾಲವೀರಾರ್ಯ ಮಹಾಸ್ವಾಮಿಗಳ ಚರಣಾರವಿಂದಗಳಿಗೆ ಮೌನ ಪ್ರಣಾಮಗಳು.
✍️ - ಮೌನ ಋಷಿ 💐🪷🌷🙏
Comments
Post a Comment